ಹೇಮಾವತಿಯ ಹರಿಕಾರ ವೈ.ಕೆ.ರಾಮಯ್ಯ ಸ್ಮರಣೆ ಜಿ.ಟಿ.ನರೇಂದ್ರ ಕುಮಾರ್
ಹೇಮಾವತಿಯ ಹರಿಕಾರ ವೈ.ಕೆ.ರಾಮಯ್ಯ ಸ್ಮರಣೆ ಜಿ.ಟಿ.ನರೇಂದ್ರ ಕುಮಾರ್
ಹೇಮಾವತಿಯ ಹರಿಕಾರ ವೈ.ಕೆ.ರಾಮಯ್ಯ ಸ್ಮರಣೆ
ಜಿ.ಟಿ.ನರೇಂದ್ರ ಕುಮಾರ್
ಕರ್ನಾಟಕದ ಜನಪರ ರಾಜಕಾರಣಿಗಳಲ್ಲೊಬ್ಬರಾದ ದಿವಂಗತ ವೈ.ಕೆ.ರಾಮಯ್ಯನವರು 1983, 1985, 1992 ಹಾಗೂ 1999ರಲ್ಲಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದರು. ರೇಷ್ಮೆ ಕೃಷಿ ಹಾಗೂ ಹೇಮಾವತಿ ನಾಲೆಗಾಗಿ ಸತತ ಹೋರಾಟ ನಡೆಸಿದವರು.
1939ರ ಆಗಸ್ಟ್ 5ರಂದು ಕುಣಿಗಲ್ ತಾಲೂಕಿನ ಯಲೆಕಡಕಲು ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದವರು. ತಾಯಿ ಚೆನ್ನಮ್ಮ; ತಂದೆ ಕಂಬೇಗೌಡ. ಎಲೆಕಡಕಲು ಮತ್ತು ಉಜ್ಜಿನಿ ಗ್ರಾಮಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಪಡೆದರು. ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಗೆ ಸೇರಿ ಎಸ್.ಎಸ್.ಎಲ್.ಸಿ. ಪಾಸಾದರು. 1962ರಲ್ಲಿ ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. 1964ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾನವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. 1966ರಲ್ಲಿ ಧಾರವಾಡದ ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಎಲ್.ಎಲ್.ಬಿ. ಪದವೀಧರರಾದರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯ ಅನಸೂಯಾ ಅವರೊಂದಿಗೆ 5-6-1968ರಂದು ವಿವಾಹವಾದರು.
ವೃತ್ತಿಜೀವನ
ರಾಮಯ್ಯನವರು 1967ರಲ್ಲಿ ತುಮಕೂರಿನಲ್ಲಿ ಹಿರಿಯ ವಕೀಲರಾದ ಎಚ್.ಎಸ್.ಶೇಷಾದ್ರಿಯವರ ಬಳಿ ವಕೀಲಿವೃತ್ತಿ ಆರಂಭಿಸಿದರು. 1970ರಲ್ಲಿ ಕುಣಿಗಲ್ ನಲ್ಲಿ ಸ್ವತಂತ್ರವಾಗಿ ವಕೀಲಿವೃತ್ತಿ ಆರಂಭಿಸಿದರು.
ವೈ.ಕೆ. ರಾಮಯ್ಯನವರು ಓರ್ವ ಪ್ರಸಿದ್ಧ ವಕೀಲರಾಗಿದ್ದರು. ಅವರ ಸಾರ್ವಜನಿಕ ಜೀವನ ರೇಷ್ಮೆ ಕೃಷಿಯ ಬಗೆಗಿನ ಹೋರಾಟದೊಂದಿಗೆ ಆರಂಭವಾಯಿತು. 1974ರಲ್ಲಿ ರಾಜ್ಯ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷರಾದರು. ರೇಷ್ಮೆ ಬೆಳೆಗಾರರಿಗೆ ಬೋನಸ್ ಕೊಡಿಸಿದ ಕೀರ್ತಿ ಇವರದು. 1983ರಲ್ಲಿ ಜನತಾಪಕ್ಷದಿಂದ ಕರ್ನಾಟಕ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ನಂತರ ಕರ್ನಾಟಕ ಗೃಹಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು. ರಾಮಕೃಷ್ಣ ಹೆಗಡೆಯವರ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರಾದರು. ರೇಷ್ಮೆ ಕೃಷಿಯ ಬಗ್ಗೆ ಅಧ್ಯಯನ ಮಾಡಲು ಜಪಾನ್ ಹಾಗೂ ಕೊರಿಯಾ ದೇಶಗಳಿಗೆ ಪ್ರವಾಸ ಹೋಗಿಬಂದರು. ವಿಪರ್ಯಾಸವೆಂದರೆ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಅವರ ಖಾತೆ ಬದಲಾಗಿತ್ತು. ತಮ್ಮ ಅನುಭವಗಳನ್ನು 'ನಾನು ಮತ್ತು ರೇಷ್ಮೆ' ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. 1988ರಲ್ಲಿ ರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದಲ್ಲಿ ತೋಟಗಾರಿಕೆ ಸಚಿವರಾದರು. 1992ರಲ್ಲಿ ಸಮಾಜವಾದಿ ಜನತಾ ಪಕ್ಷಕ್ಕೆ ಸೇರಿ ರಾಜ್ಯಾಧ್ಯಕ್ಷರಾದರು. ನಂತರ ಆ ಪಕ್ಷವನ್ನು ತೊರೆದರು. 1997-98ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. 1999ರಲ್ಲಿ ಹುಲಿಯೂರುದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಲ್ಕನೆಯ ಬಾರಿಗೆ ಕರ್ನಾಟಕ ವಿಧಾನಸಭೆ ಪ್ರವೇಶಿಸಿದರು. ರಾಮಯ್ಯನವರು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದರು.
ವ್ಯಕ್ತಿತ್ವ
ನೇರ ನಡೆನುಡಿಗೆ ಹೆಸರಾಗಿದ್ದ ವೈ. ಕೆ. ರಾಮಯ್ಯನವರು ಮುಂಗೋಪಿಯೆಂದೇ ಪ್ರಸಿದ್ಧರಾಗಿದ್ದರು. ನೌಕರಶಾಹಿಗೆ ಸಿಂಹಸ್ವಪ್ನವಾಗಿದ್ದರು. ನಿಷ್ಠುರವಾದಿಯೂ, ಛಲವಾದಿಯೂ ಆಗಿದ್ದರು. ಪಾದಯಾತ್ರೆ ಕೈಗೊಳ್ಳುವ ಮೂಲಕ ತಮ್ಮ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದರು. ರಾಮಯ್ವಯನವರು ಕುವೆಂಪು ಅವರ ಅಭಿಮಾನಿಯಾಗಿದ್ದರು. ಅವರ ಸಾಹಿತ್ಯ ಪ್ರೀತಿಯನ್ನು ಕಂಡ ಕೆಲ ಸಾಹಿತಿಗಳೇ ರಾಮಯ್ವನವರ ಅಭಿಮಾನಿಗಳಾಗಿದ್ದರು. ಪರಿಸರ ಪ್ರೇಮಿಯೂ ಆಗಿದ್ದ ಅವರು ರಸ್ತೆ ಬದಿಯಲ್ಲಿ ಸಾಲುಮರಗಳನ್ನು ನೆಡಿಸಿದರು. ರೈತರಿಗೂ ಸಸಿಗಳನ್ನು ವಿತರಿಸಿದರು.
ವೈ. ಕೆ. ರಾಮಯ್ಯನವರಿಗೆ 60 ವರ್ಷ ತುಂಬಿದಾಗ ಅವರ ಅಭಿಮಾನಿಗಳು ಅವರಿಗೆ ತುಮಕೂರಿನಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು. ಆ ಸಮಾರಂಭಕ್ಕೆ ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ವೈ.ಕೆ.ರಾಮಯ್ಯನವರನ್ನು ಕುರಿತು 4 ಅಭಿನಂದನಾ ಸಂಪುಟಗಳನ್ನು (ಜೀವನದಿ, ಹೊನ್ನಚಂದ್ರಿಕೆ, ಹೇಮಾವತಿ ಮತ್ತು ಕ್ರಿಯಾಶೀಲ ಸಂಗಾತಿ) ಹೊರತರಲಾಯಿತು.
4-1-2004ರಂದು ಕುಣಿಗಲ್‍ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.