ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ: ಎರಡನೇ ದಿನವೂ ಮುಂದುವರಿದ ತನಿಖೆ

acb

ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ: ಎರಡನೇ ದಿನವೂ ಮುಂದುವರಿದ ತನಿಖೆ


ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ
ಎಸಿಬಿ ದಾಳಿ: ಎರಡನೇ ದಿನವೂ ಮುಂದುವರಿದ ತನಿಖೆ


ತುಮಕೂರು: ಇಲ್ಲಿನ ಹೇಮಾವತಿ ನಾಲಾ ವಲಯದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಸಂಜೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಂಗಳವಾರವೂ ಸಹ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. 


ನಗರದ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ನಾಲಾ ಕಚೇರಿ ಆವರಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕವಿತಾ ಅವರ ಕಚೇರಿ ಮೇಲೆ ಎಸಿಬಿ ಕೇಂದ್ರ ವಲಯ ಎಸ್ಪಿ ಕಲಾ ಕೃಷ್ಣಸ್ವಾಮಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿಯವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್‌ಗಳಾದ ವೀರೇಂದ್ರ, ಎಸ್. ವಿಜಯಲಕ್ಷಿ÷್ಮ ಮತ್ತು ಸಿಬ್ಬಂದಿ ಸೋಮವಾರ ಸಂಜೆ ದಾಳಿ ನಡೆಸಿದ್ದು, ರಾತ್ರಿಯಾಗಿದ್ದರಿಂದ ತಪಾಸಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮಂಗಳವಾರ ಬೆಳಿಗ್ಗೆ ಮತ್ತೆ ದಾಖಲಾತಿಗಳ ತಪಾಸಣೆ ಮುಂದುವರೆಸಿದ್ದಾರೆ.


ಹೇಮಾವತಿ ನಾಲಾ ವಲಯದಲ್ಲಿ ಸ್ವಾಧೀನ ಪಡಿಸಿಕೊಂಡ ರೈತರ ಜಮೀನುಗಳಿಗೆ ಸಕಾಲಕ್ಕೆ ಪರಿಹಾರ ಕೊಡದೆ ವಿನಾಕಾರಣ ವಿಳಂಬ ಮಾಡಿರುವುದು, ಹಿರಿತನ ಪರಿಗಣಿಸದಿರುವುದು, ಹಣ ಕೊಟ್ಟವರಿಗೆ ಮತ್ತು ಶಿಫಾರಸ್ಸು ಮಾಡಿಸಿದವರಿಗೆ ಪರಿಹಾರ ವಿತರಣೆ ಮಾಡುವ ಮೂಲಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. 


ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಹಲವು ದಾಖಲಾತಿಗಳ ಪರಿಶೀಲನೆ ನಡೆಸಿದ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.


ದಾಳಿ ಸ್ವಾಗತಾರ್ಹ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ರೈತರಿಗೆ ಪರಿಹಾರ ನೀಡುವಲ್ಲಿ ಮೀನಾಮೇಷ ಎಣಿಸುತ್ತಾ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವ ಭೂಸ್ವಾಧೀನಾಧಿಕಾರಿಗಳ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿರುವುದು ಸ್ವಾಗತಾರ್ಹ ಎಂದು ರೈತ ಮುಖಂಡ ಆನಂದ್ ಪಟೇಲ್ ಹೇಳಿದ್ದಾರೆ.


ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ರೈತರ ಭೂಮಿಯನ್ನು ನೀರಾವರಿ ಯೋಜನೆಗಾಗಿ ವಶಪಡಿಸಿಕೊಂಡವ 10-12 ವರ್ಷಗಳಾದರೂ ಪರಿಹಾರ ಕೊಟ್ಟಿಲ್ಲ. ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕೇವಲ ನೋಟೀಸ್ ಕೊಟ್ಟಿರುವುದನ್ನು ಹೊರತುಪಡಿಸಿದರೆ ಅವಾರ್ಡ್ವರೆಗೂ ಕಾಯದೆ ಗುತ್ತಿಗೆದಾರರಿಗೆ ಜಾಗವನ್ನು ಕೆಲಸ ಮಾಡಲು ಹಸ್ತಾಂತರ ಮಾಡಿದ್ದಾರೆ. 


ನೀರಾವರಿ ಇಲಾಖೆಯಿಂದ ಹಣವನ್ನು ಗುತ್ತಿಗೆದಾರರಿಗೆ ಹಣ ಕೊಡುತ್ತಾರೆ. ಆದರೆ ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ಕೊಡಲು ಮುಂದಾಗುತ್ತಿಲ್ಲ. ಭೂಸ್ವಾಧೀನಾಧಿಕಾರಿ ಕೇವಲ 3-6 ತಿಂಗಳ ಇದ್ದು, ಅಲ್ಲಿನ ಬೇರೆಡೆ ವರ್ಗಾವಣೆಗೊಳ್ಳುತ್ತಾರೆ. ಹೀಗಾಗಿ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ರೈತ ಸಂಘಟನೆಗಳು ಹೋರಾಟ ಮಾಡಿ ಸರ್ಕಾರದ ಗಮನಕ್ಕೆ ತಂದಾಗ ಅಲ್ಪಸ್ವಲ್ಪ ಹಣ ಬಿಡುಗಡೆ ಮಾಡಿದರು. ಆ ಹಣದಲ್ಲಿ ರೈತರಿಂದ ಶೇ. 10 ರಷ್ಟು ಕಮೀಷನ್ ಪಡೆದು ಪರಿಹಾರ ಹಣ ಬಿಡುಗಡೆ ಮಾಡಿದ್ದಾರೆ. ಈ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.


ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮುಂದೆ ರೈತರ ಪರಿಹಾರಕ್ಕಾಗಿ ಹಲವು ಬಾರಿ ಪ್ರತಿಭಟನೆ ಮಾಡಿದ್ದೇವೆ. ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಬಿಲ್ ಕೊಡಲು ಹಣ ಇದೆ. ಆದರೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಲು ಇವರಿಗೆ ಹಣ ಇಲ್ಲ. ಈ ಅಧಿಕಾರಿಗಳ ಧೋರಣೆಯಿಂದಾಗಿ ರೈತರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂದರು.


ಎಸಿಬಿ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸಿ ಈ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದು ರೈತರಿಗೆ ನ್ಯಾಯ ಒದಗಿಸಿಕೊಡುವ ಜತೆಗೆ ಶೀಘ್ರವಾಗಿ ಪರಿಹಾರ ದೊರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.